Tuesday, January 8, 2008

ತಾಯ್ತನದ ಸಿರಿ ಸಂಭ್ರಮಕೆ, ತವರ ಹರಕೆಯ ಉಡುಗೊರೆಯಂತೆ

ಮಡಿಲು ಕಾರ್ಯಕ್ರಮ

ತಾಯ್ತನದ ಸಿರಿ ಸಂಭ್ರಮಕೆ, ತವರ ಹರಕೆಯ ಉಡುಗೊರೆಯಂತೆ ಸುರಕ್ಷಿತ ಬಾಣಂತನಕ್ಕೆ ಅಗತ್ಯ ವಸ್ತುಗಳ ಕಿಟ್. ಸರಳವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ. ಅದೇ ಮಡಿಲು ಕಾರ್ಯಕ್ರಮ. ತಾಯ್ತನದ ಒಡಲು, ತುಂಬಿತು ಮಡಿಲು ಎಂಬುದು ಇದರ ಧ್ಯೇಯ.
ಇಂದಿನ ದುಬಾರಿ ಯುಗದಲ್ಲಿ ಬಡವರು ಜೀವನ ನಡೆಸುವುದೇ ಕಷ್ಟ. ಬಡ ಮಹಿಳೆಯರಿಗೆ ಹೆರಿಗೆ ನೋವಿನ ಜತೆಗೆ ದುಬಾರಿ ಆಸ್ಪತ್ರೆ, ಔಷಧಗಳ ಬಿಲ್ಲು ಬೇನೆಯನ್ನು ಇಮ್ಮಡಿಗೊಳಿಸುತ್ತದೆ. ಹೀಗಿರುವಾಗ ತಾಯಿ, ಮಗುವಿಗೆ ಅವಶ್ಯವಿರುವ ಗುಣಮಟ್ಟದ ವಸ್ತುಗಳ ಖರೀದಿ ಸಾಧ್ಯವೇ ಇರುವುದಿಲ್ಲ.ಇದನ್ನು ಗಮನಿಸಿರುವ ಸರಕಾರ, ಬಡತನ ರೇಖೆಗಿಂತ ಕೆಳಗಿನ ಮಹಿಳೆಯರ ಹೆರಿಗೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಉದ್ದೇಶದಿಂದ ಮುಖ್ಯವಾಗಿ ತಾಯಿ- ಮಗುವಿಗೆ ಆರೋಗ್ಯಕರ ಬಾಣಂತನ ದೊರಕಿಸಿ ಕೊಡಲು ಹಾಗೂ ಇಂದಿಗೂ ಮನೆಗಳಲ್ಲೇ ನಡೆಯುವ ಅಸುರಕ್ಷಿತ ಹೆರಿಗೆ ತಪ್ಪಿಸಿ, ಗರ್ಭಿಣಿ ತಾಯಂದಿರುವ ಹೆರಿಗೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವಂತೆ ಉತ್ತೇಜಿಸಲು ಈ ಅಪೂರ್ವ ಯೋಜನೆಯನ್ನು ಸೆ.೧೫ರಂದು ಜಾರಿಗೆ ತಂದಿದೆ.
ಮಡಿಲು ಕಾರ್ಯಕ್ರಮದಲ್ಲಿ ಹೆರಿಗೆ ಬಳಿಕ ಬಾಣಂತಿಯರಿಗೆ ಒಂದು ವೈದ್ಯಕೀಯ ಕಿಟ್ ನೀಡಲಾಗುತ್ತದೆ. ಈ ಕಿಟ್‌ಗಳನ್ನು ಪೂರೈಸಲು ಸರಕಾರ ಕಳೆದ ಬಜೆಟ್‌ನಲ್ಲಿ ಐದು ಕೋಟಿ ರೂ. ಮೀಸಲಿಟ್ಟಿದೆ.

ಕಿಟ್‌ನಲ್ಲಿ ೧೯ ವಿಧದ ಸಾಮಗ್ರಿಗಳಿರುತ್ತವೆ.

  1. ಸೊಳ್ಳೆ ಪರದೆ(ತಾಯಿಗೆ)- ಮಲೇರಿಯಾಗ್ರಸ್ತ ೨೦ ಜಿಲ್ಲೆಗಳಿಗೆ ಮಾತ್ರ
  2. ಜಮಖಾನ (ಮೀಡಿಯಂ ಸೈಜ್)
  3. ಬೆಡ್‌ಶೀಟ್ (ಮೀಡಿಯಂ ಸೈಜ್)
  4. ತಾಯಿಗೆ ದಪ್ಪನೆ ಹೊದಿಕೆ (ಮೀಡಿಯಂ)
  5. ತಾಯಿಗೆ ಮೈಸೂರು ರೋಸ್ ಸೋಪು
  6. ಬಟ್ಟೆ ಒಗೆಯುವ ಸಾಬೂನು ಮೈಸೂರ್ ಡಿಟರ್ಜೆಟ್ ಕೇಕ್(ಎಂಡಿಸಿ)
  7. ತಾಯಿಗೆ ಹೊಟ್ಟೆಗೆ ಕಟ್ಟುವ ಬಟ್ಟೆ೮.
  8. ಸ್ಯಾನಿಟರಿ ಪ್ಯಾಡ್ಸ್(ಕುಣಿಕೆ ಇರುವ ಚೌಕ ಕಾಟನ್ ಬಟ್ಟೆ)
  9. ತಾಯಿಗೆ ಬಾಚಣಿಕೆಯೊಂದಿಗೆ ಕೊಬ್ಬರಿ ಎಣ್ಣೆ
  10. ತಾಯಿಗೆ ಟವೆಲ್]
  11. ತಾಯಿಗೆ ಹಲ್ಲುಜ್ಜುವ ಬ್ರಶ್ ಮತ್ತು ಪೇಸ್ಟ್
  12. ಮಗುವಿಗೆ ರಬ್ಬರ್ ಶೀಟ್
  13. ಮಗುವಿಗೆ ರಬ್ಬರ್ ಶೀಟ್ ಮೇಲೆ ಬೆಡ್‌ಶೀಟ್
  14. ಮಗುವಿಗೆ ಹೊದಿಕೆ
  15. ಮಗುವಿಗೆ ಮೈಸೂರು ಸ್ಯಾಂಡಲ್ ಬೇಬಿ ಸಾಬೂನು ಹಾಗೂ ಪೌಡರ್
  16. ಮಗುವಿಗೆ ಡೈಪರ್
  17. ಮಗುವಿಗೆ ಜಬ್ಲ
  18. ಮಗುವಿಗೆ ಸ್ವೆಟರ್ ಕುಲಾವಿ, ಕಾಲುಚೀಲ
  19. ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್

ಎರಡು ಲಕ್ಷ ಫಲಾನುಭವಿ

ರಾಜ್ಯದಲ್ಲಿ ೨೦೦೧ ಜನಗಣತಿ ಪ್ರಕಾರ ೫,೨೮,೫೦,೫೬೨ ಜನಸಂಖ್ಯೆ ಇದೆ. ಈ ಪೈಕಿ ಶೇ.೭೦ರಷ್ಟು ಬಡತನ ರೇಖೆಗಿಂತ ಕೆಳಗಿನವರಿದ್ದಾರೆ. ರಾಜ್ಯದಲ್ಲಿ ಒಟ್ಟು ೧೦ ಲಕ್ಷ ಹೆರಿಗೆಗಳು ಪ್ರತಿವರ್ಷ ಆಗುತ್ತಿದೆ. ಆ ಪೈಕಿ ಸುಮಾರು ಏಳು ಲಕ್ಷ ಹೆರಿಗೆ ಮಾಡಿಸಿಕೊಳ್ಳುವ ತಾಯಂದಿರು ಬಡತನ ರೇಖೆಗಿಂತ ಕೆಳಗಿನವರು. ಇದರಲ್ಲಿ ಶೇ.೪೦ರಷ್ಟು ಎರಡು ಮಕ್ಕಳ ಸಂತಾನ ಹೊಂದಿದ ಮಹಿಳೆಯರು. ಇದರಂತೆ ಎರಡು ಲಕ್ಷ ತಾಯಂದಿರು ವರ್ಷಕ್ಕೆ "ಮಡಿಲು’ ಯೋಜನೆ ಫಲಾನುಭವಿಗಳಾಗುತ್ತಾರೆ.

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವವರ ಸಂಖ್ಯೆ ಶೇ.೬೭ರಷ್ಟು ಇದೆ. ಇದನ್ನು ೨೦೧೦ಕ್ಕೆ ಶೇ.೯೦ರಷ್ಟು ಹೆಚ್ಚಳ ಮಾಡುವ ಉದ್ದೇಶವಿದೆ. ಈ ಗುರಿ ತಲುಪಲು "ಮಡಿಲು’ ಕಾರ್ಯಕ್ರಮ ಸಹಕಾರಿಯಾಗಲಿದೆ.

* ಉದ್ದೇಶ

ಕಡು ಬಡ ವರ್ಗಕ್ಕೆ ಸೇರಿದ ಗರ್ಭಿಣಿಯರು ಆರೋಗ್ಯ ಕೇಂದ್ರ/ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯ ಕಾಪಾಡುವುದು.ರಾಜ್ಯದಲ್ಲಿ ತಾಯಂದಿರ ಮರಣ ಮತ್ತು ಶಿಶು ಮರಣ ಪ್ರಮಾಣ ಗಣನೀಯ ತಗ್ಗಿಸುವುದು.ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವುದು.

ಫಲಾನುಭವಿಗಳು

* ಬಡತನ ರೇಖೆಗಿಂತ ಕೆಳಗಿನವರು * ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡವರು * ಎರಡು ಮಕ್ಕಳಿಗೆ ಸೀಮಿತವಾಗಿರುವವರು * ಜನನಿ ಸುರಕ್ಷಾ ಯೋಜನೆ ಕಾರ್ಡ್ ಹೊಂದಿರುವವರು * ಬಡತನ ರೇಖೆಗಿಂತ ಕೆಳಗಿದ್ದು ಬಿಪಿಎಲ್ ಕಾರ್ಡ್ ಹೊಂದಿಲ್ಲದವರು, ಸಂಬಂಧಪಟ್ಟ ತಹಸೀಲ್ದಾರರಿಂದ ಬಿಪಿಎಲ್‌ಗೆ ಸಮಾನಾಂತರವಾದ ದೃಡೀಕರಣ ಪತ್ರ ಪಡೆದುಕೊಂಡು ಈ ಸೌಲಭ್ಯ ಪಡೆಯಬಹುದು.ಸೂಚನೆ* ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾದವರಿಗೆ ಈ ಸೌಲಭ್ಯ ಸಿಗುವುದಿಲ್ಲ * ಉಪಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಸ್ತ್ರೀಯರು ಸಾಧ್ಯವಾದಷ್ಟು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು.

1 comment:

veena said...

ಹಾಯ್ ಗುರು,

ಬ್ಲಾಗ್ ಲೋಕಕ್ಕೆ ಸ್ವಾಗತ.. ಅಂತೂ ನಿಮ್ಮ ಬ್ಲಾಗ್ ನಲ್ಲೂ ವರದಿ ಬಿತ್ತರವಾಗುತ್ತಿದೆ. ವಾರೆವ್ಹಾ